ಬ್ಲಾಗ್ ಸಂಗ್ರಹಗಳು

ಕಾಲದ ನದಿಯ ಪಯಣ

ಕಾಲದ ನದಿಯ ಪಯಣ

ಕಾಲದ ನದಿಯ ಪಯಣ

ನಿಲ್ಲದೆ ಹರಿಯುತಿದೆ ಕಾಲದ ನದಿ
ಭೋರ್ಗರೆದು ನಿಗೂಢ ಬೆಟ್ಟದಿ
ಅಗೋ ಅಗೋಚರ ಸಾಗರದೆಡೆಗೆ

ಸೆಣೆಸದಿರು ಅದರ ಹರಿವೊಂದಿಗೆ
ಸಾಗದಿರು ಅದರ ಮೂಲದೆಡೆಗೆ
ಉಳಿದಿಲ್ಲ ಹಿಂದೆ ಸಾಗ ಹೊರಟವರು

ಹೋಗದಿರು ಅದರ ದಡದೆಡೆಗೆ
ಸಿಗದಲ್ಲೆಂದೂ ಗಮ್ಯಸ್ಥಾನ
ಇಹುದಲ್ಲಿ ನಿಚ್ಚಳ ವಿನಾಶ

ಕಾಲದ ನದಿಯ ಹಿಮ್ಮೆಟ್ಟಿದವರಿಲ್ಲ
ಕಳೆದು ಹೊದರದರ ಗರ್ಭದೊಳಗೆ
ಹಿಮ್ಮೆಟ್ಟಿ ಸಾಗಹೊರಟವರು

ಸಾಗು ಅದರ ರಭಸದೊಡನೆ
ಸಾಗಿಸಿ ಬಾಳ ದೋಣಿಯನು
ತಪ್ಪಿಸುತ ದುರ್ದರ ಬಂಡೆಗಳನು

ನಡೆಸು ಬದುಕ ಪಯಣವ
ಮುನ್ನುಗ್ಗು ಅಗೋಚರ ಸಾಗರದೆಡೆಗೆ
ಬಾಳ ದೋಣಿಯಲಿ, ಮೋಕ್ಷದೆಡೆಗೆ …

ಪ್ರಕವಿ(Prakavi)
©2015 Pradeep Hegde. All rights reserved.

Image Credit: University of Victoria Libraries from Victoria, Canada via Wikimedia Commons

ಮನುಜಾಯಣ ಭಾಗ-೨

ಮನುಜಾಯಣ

ಮನುಜಾಯಣ

ನಗರವೆಂದರೇನು?
ನೆಲ ಕಾಣದಷ್ಟು ಜನ ತುಂಬಿ
ತುಳುಕಿದೂರಲ್ಲಿ ಎಲ್ಲೆಲ್ಲೂ ಮನುಜರಿರಲೂ
ಹಿಡಿದು ಭೂತಗನ್ನಡಿಯ ಅವಲೋಕಿಸಲೂ
ಚೂರು ಮನುಷ್ಯತ್ವ ಕಾಣಸಿಗದ
ಸ್ವಾರ್ಥಿಗಳ ಮತ್ಸರಲೋಕ


ಮನುಕುಲವೆಂದರೇನು?
ಚಂದ್ರಲೋಕಕೆ ಲಗ್ಗೆಯಿಟ್ಟ,
ಜೀವರಹಸ್ಯವ ಭೇದಿಸುತಿಹ
ಜ್ಞಾನ ವಿಜ್ಞಾನವು ಪ್ರಕಾಶಿಸಲೂ
ಅಂಧಕಾರದಲೇ ಮುಳುಗಿಹ
ಕಣ್ಣುಳ್ಳ ಕುರುಡರ ಸಂತೆ


ಮನುಜನೆಂದರಾರು?
ಜಗ, ಜಗದಗಾಧ ವನ್ಯರಾಶಿ
ಸಕಲ ಜೀವಸಂಕುಲ
ಸಹಸ್ರ ಸಂಪನ್ಮೂಲಗಳಿಹವು
ತನ್ನ ಸೇವೆಗೆಂದೇ ಎನುವ
ತನದೇ ಇಂದ್ರಿಯಗಳ ದಾಸಾನುದಾಸ

ಇದು, ಈ ಬ್ಲಾಗಿನಲ್ಲಿ ೯ ಜನವರಿ, ೨೦೦೯ ರಂದು ಪ್ರಕಾಷಿಸಿದ ಮನುಜಾಯಣ ಕವನದ ಎರಡನೆಯ ಭಾಗ. ಮೊದಲನೆಯದನ್ನು ನೋಡಲು, ಇಲ್ಲಿ ಕ್ಲಿಕ್ಕಿಸಿರಿ.

ಪ್ರಕವಿ(Prakavi)
©2010 Pradeep Hegde. All rights reserved.

ಕಾಣದ ಕವಿತೆ

ಕಾಣದ ಕವಿತೆ

ಕಾಣದ ಕವಿತೆ

ಕಾಣದ ಕವಿತೆಯ ಹಾಡಲಿ ಹೇಗೆ
ನೋಡದೆ ನಿನ್ನನು ಬಾಳಲಿ ಹೇಗೆ
ಹೇಳೆಯಾ.. ನೀ ಹೇಳೆಯಾ..
ಪ್ರೀತಿಯ ಸುಡುವುದೇ ವಿರಹದ ಬೇಗೆ?


ಅಪ್ಪಳಿಸಿ ಕೊರೆವ ಕಡಲ ಅಲೆಗಳ,
ಮನ ವನದಿ ಅಲೆದಾಡುವ ಕಾಡ್ಗಿಚ್ಚ ಕಿಡಿಗಳ,
ಹೇಳೆಯಾ.. ನೀ ಹೇಳೆಯಾ..
ಭಾವ ಸಾಗರವ ತಡೆದಿಡಲಿ ಹೇಗೆ?


ಕಣ್ಣೆಂಬ ಪುಟದಲ್ಲಿ ನೀನಿಂತು ನಿಂತೆ
ಎದೆಯೆಂಬ ರಥದಲ್ಲಿ ನೀನಿಂತು ಕುಂತೆ
ಕೇಳೆಯಾ.. ನೀ ಕೇಳೆಯಾ..
ಮನವೆಂಬ ಊರೆಲ್ಲ ನೆನಪೆಂಬ ಸಂತೆ…

ಯುಗಾದಿಯ ಹಾರ್ದಿಕ ಶುಭಾಶಯಗಳು…
ಪ್ರಕವಿ(Prakavi)
©2010 Pradeep Hegde. All rights reserved

ಕಂಗ್ಲೀಷ್ ಮಹಾತ್ಮೆ

ಕಂಗ್ಲೀಷ್ ಮಹಾತ್ಮೆ

ಕಂಗ್ಲೀಷ್ ಮಹಾತ್ಮೆ

ಕಂಗ್ಲೀಷೆಂದರೆ,
ಹಂಪಿಯ ಅವಶೇಷಗಳ ನಡು ನಡುವೆ
ನಿಂತ ವ್ಯವಹಾರ ಮಳಿಗೆಗಳು..
ಪಟ್ಟದಕಲ್ಲ ರುಂಡ ತುಂಡಾದ
ಧ್ವಂಸ ವಿಗ್ರಹಗಳು..
ದೇಹಕೆ ಜೀವ ನೀಡುವ ಶ್ರೇಷ್ಠ
ನೈವೇದ್ಯದೊಳ ಕಲ್ಲ ಚೂರುಗಳು..


ಕಂಗ್ಲೀಷೆಂದರೆ,
ಚಹದಲ್ಲಿ ತೇಲಾಡುವ ನೋಣ,
ಅಮೃತ ಜಲದೋಳು ರೋಗದ ಕಣ,
ದುರ್ಬಳಕೆಯಿಂದ ಹರಿದ ಹಣ,
ನಡೆದಾಡುವ ಜೀವಂತ ಹೆಣ,
ಬೆಲ್ಲ ಕಹಿಯಾದ ಕ್ಷಣ..
ಕಂಗ್ಲೀಷಿಗರಿಗೆಲ್ಲಿ ಕನ್ನಡದ ಋಣ?


ಕಿರುಚಿ ಕೂಗುವುದು ಕತ್ತೆಯು
ತಾನು ಕೋಗಿಲೆಯೆಂದು..
ಬೊಗಳಿ ಬೀಗುವರು ಕಂಗ್ಲೀಷರು
ತಾವು ಕನ್ನಡಿಗರೆಂದು….

ಪ್ರಕವಿ(Prakavi)
©2010 Pradeep Hegde. All rights reserved.

Image Attributes:
http://commons.wikimedia.org/wiki/File:Donkey-06.jpg
http://commons.wikimedia.org/wiki/File:Asian_koel.jpg

%d bloggers like this: