ಪ್ರकविಯ ವಲಯ :: prakavi’s zone

ಮಾಟದಾ ಪೆಟ್ಟಿಗೆ…

Posted by: prakavi on: October 15, 2009

ಮಾಟದಾ ಪೆಟ್ಟಿಗೆ

ಮಾಟದಾ ಪೆಟ್ಟಿಗೆ

ಬಂದು ಕೂತೈತೆ
ಮನೆಮಂದಿ ನಡುವೆ
ಮಾಟದಾ ಪೆಟ್ಟಿಗೆ,
ನೋಡಿದಾಯಿತು ದಿನನಿತ್ಯ
ಅವರಿವರ ಹೊಡೆದಾಟ
ಮರುಗಿದಾಯಿತು ನೋಡಿ
ಅವರಿವರ ಸಂಕಷ್ಟ
ಬೇಕೆ ಅತ್ಯಾಚಾರ?
ಹೊಲಸು ರಾಜಕೀಯ?
ತುಂಬಿತೆಲ್ಲವು ತುಂಬುಮನೆಯಲ್ಲಿ
ಮತ್ತೀಗ ನೋಡಿ
ಮಾಟದಾ ಪರಿಣಾಮ
ಇದ್ದ ಮುದ್ದಿನ ಮಕ್ಕಳೊಳು
ಕಾದಾಟ, ಬಡಿದಾಟ
ಒಂದು ಕತ್ತಿಯಾಗೆ
ಇನ್ನೊಂದು ದೊಣ್ಣೆ
ಹೆತ್ತಮ್ಮನ ಕಣ್ಣಲ್ಲಿ
ಸುರಿವ ಧಾರಾವಾಹಿ..

ಅಂದ ಹಾಗೆ.. ಈ ಕವನ ಬರೆದದ್ದು ನನ್ನ ತಾಯಿ.
ಪ್ರकवि(Prakavi)
©2009 Pradeep Features. All rights reserved

ಕಾಲವೆಲ್ಲವನೂ ಬದಲಿವುದೆನುವೇಕಯ್ಯಾ
ಕಾಲವಲ್ಲ, ಕಾಲದೊಡನೆ ಬದಲಾಗುವನು ಮನುಷ್ಯನಯ್ಯಾ..


ಹಿನ್ನೆಲೆಯಂತೆ ಬಣ್ಣ ಬದಲಾಯಿಸುವುದು ಓತಿಯಯ್ಯಾ
ಸಂದರ್ಭಕೆ ಬಣ್ಣ ಬದಲಾಯಿಸುವನು ಮನುಷ್ಯನಯ್ಯಾ..


ಋತುವಿನಂತೆ ಬದಲಾಗುವುದು ನಿಸರ್ಗವಯ್ಯಾ
ಸ್ವಾರ್ಥಕೆ ಬದಲಾಗುವನು ಮನುಷ್ಯನಯ್ಯಾ..


ಕಗ್ಗಲ್ಲ ಬಂಡೆಯೂ ಮರಳಾಗುವುದಯ್ಯಾ
ಬದಲಾಗದೊಲ್ಲವನು ಉಳಿವನೇನಯ್ಯ..


ಬದಲಾವಣೆ ಜಗದ ನಿಯಮವಯ್ಯಾ
ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ…


ಪ್ರकवि(Prakavi)

©2009 Pradeep Features. All rights reserved.

ನಿನ್ನ ಮರೆಯಲಾರೆ…

Posted by: prakavi on: August 26, 2009

ನಿನ್ನ ಗೆಲುವೆನೆಂದು ಅಂದು
ನಿನಗೆ ಮನವ ಸೋತೆ
ನಿನ್ನ ಮರೆವೆನೆಂದು ಇಂದು
ಪಣವ ಕಟ್ಟಿ ಸೋತೆ


ಮರೆಯಾದರೂ ಕಣ್ಣ ಕಡಲಲ್ಲಿ
ನಲಿದಾಡುವೆ ಮನದ ಮುಗಿಲಲ್ಲಿ
ವಿರಹ ಬೆಂದರೂ ಒಡಲ ಮಡಿಲಲ್ಲಿ
ನೆಲೆಸಿರುವೆ ಎದೆಯ ಒಡಲಲ್ಲಿ


ಒಡೆದರೂ ನನ್ನೆದೆಯು
ಮಿಡಿವುದು ನಿನಗಾಗಿ
ಕೊಲೆಯಾದ ಕನಸುಗಳು
ಕಾಡುವವು ಗರವಾಗಿ


ನಿನ್ನ ಮರೆಯಲಾರೆನೇಕೆ
ಮಹಾ ಮರೆಗುಳಿಯಾದರೂ
ನಿನ್ನ ಬಯಸದಿರಲಾರೆನೇಕೆ
ಬಯಕೆಯ ಕೋಟೆ ಕುಸಿದರೂ…


ಪ್ರकवि(Prakavi)

©2009 Pradeep Features. All rights reserved.

ತೈಲಶಕಟ ಪ್ರಸಂಗ

Posted by: prakavi on: August 10, 2009

ಕಸದ ರಾಶಿಯಲಿ ತುಂಬಿ ತುಳುಕುವ
ನೊಣಗಳಂತೆ ಜಿಣುಗುವ ಜನ
ತುಂಬಿದ ತೈಲಶಕಟ ವಾಹನದೊಳು
ಅಲೆದಾಡುತಲಿದ್ದ ನೋಟ ಚಂಗನೆ
ನಿಂತಿತು ಬೆರಗಾಗಿ ನಿನ್ನ ಕಂಡು!


ಅಂಜದಿರು, ಹರೆಯದ ಪ್ರಾಯದಲಿ
ಹೀಗಾಗುವುದಸಮಾನ್ಯವೇನಲ್ಲ..
ಹಸಿದ ತೋಳಗಳಂತೆ ದಿಟ್ಟಿಸುವವರು
ಹಾಳು ಬೀಳಲಿ, ಮರೆತು ಅವರನೆಲ್ಲ
ಒಮ್ಮೆ ನೊಡು ನನ್ನನೇ, ಕಾದಿಹೆ ಭೇಟಿಗೆ..


ಸಹಸ್ರ ಗುಂಡಿಗಳಲಿ ಎದ್ದು ಬಿದ್ದು
ಮುಂದುವರೆವ ತೈಲಶಕಟದಲಿ
ಚಟ್ನಿಯಾಗುವಂತೆ ತುಂಬಿ ನೇತಾಡುವ
ರಾಹುಗಳು ಅಡ್ಡಡ್ಡ ಬಂದು
ತಂದಿಹರು ನಿನ್ನ ಮುದ್ದು ಮೊಗಕೆ ಗ್ರಹಣ..


ಬಳಿ ಬರಲೆಂದು ಮುಂದೆ ಬಂದರೆ
ಒತ್ತಡದಿ ನೂಕಿದಂತಾಗಲು ಹೊರಬೀಳುವರು
ಮುಂದಿನ ಬಾಗಿಲಲಿ ನೇತಾಡುವ ಬೇತಾಳರು!
ಬದುಕಲಿ ಬಡಜೀವಗಳು, ನಮ್ಮ ಸ್ಟಾಪ್
ಬಂದೊಡನೆ ಭೇಟಿಯಾಗೋಣ, ಜಾರಿಕೊಳ್ಳಬೇಡ!


ಎಲ್ಲಿ ಮಾಯವಾಗಿಹೆ ಇಷ್ಟು ದಿನ?
ನೀನಿರದ ಡಬ್ಬಾ ಗಾಡಿಯಲಿ
ಪ್ರಯಾಣವು ಬಲು ಪ್ರಯಾಸವು!
ನಿನಗೆಂದೇ ಒಂದು ಸ್ಟಾಪ್ ಮೊದಲು ಇಳಿವವನಿಗೆ
ಚೂರು ದಯೆ ತೋರು, ಪುಟ್ಟ ನಗೆ ಬೀರು…


ಈ ಹಾಳು ನೂಕು ನುಗ್ಗಾಟದಲ್ಲೊಂದು
ಕಣ್ಣು ಜೇಬಿನ ಮೇಲೆ, ಮತ್ತೊಂದು
ನಿನ ಮೇಲಿಟ್ಟು ಒದ್ದಾಡುತಿರುವೆ..
ನಾಳೆ ಈ ಗಾಡಿಯಲಿ ಬರಬೇಡ ಕನ್ಯೆ,
ಮುಂದಿನ ತೈಲಶಕಟ ಚೂರು ವಾಸಿ…


ಪ್ರकवि(Prakavi)

©2009 Pradeep Features. All rights reserved.

ಆ ದಿನಗಳು…

Posted by: prakavi on: August 5, 2009

ಕಾಲೇಜೆಂದರೆ ಅಜೀವನ ವನವಾಸ
ಪರೀಕ್ಷೆಯೆಂದರೆ ಯುದ್ಧಕಾಲೇ ಶಸ್ತ್ರಾಭ್ಯಾಸ
ಹಾಜರು ಪ್ರತಿ ಶನಿವಾರ ಮಧ್ಯಾಹ್ನ
ಚಿತ್ರಮಂದಿರದಲಿ ಆಶೀಷ, ಪ್ರದೀಪ, ಶ್ರೀಹಾಸ!


ಲೋಕವೊಂದು ದುಷ್ಟರ ಕೂಟ
ಅದರಲ್ಲಿ ನಾವು ಕೆಲ ದುಷ್ಟರು
ಅಂತಿಂಥ ದುಷ್ಟರಲ್ಲ ಸ್ವಾಮೀ!
ಅವರಿವರ ತಲೆ ತಿಂದು ತೇಗುವವರು..


ಭೌತಶಾಸ್ತ್ರದ ಭೂತ ಬಿಡಲಿಲ್ಲ
ಲೆಕ್ಕಶಾಸ್ತ್ರದ ಲೆಕ್ಕದರಿವಿಲ್ಲ
ರಾಸಾಯನಶಾಸ್ತ್ರವೇನೋ ತಿಳಿದಿಲ್ಲ
ಹೋಟೇಲಿನ ರಾಸಾಯನ ತಿಂದು ತೇಗಿದ್ದೇ ಸಾಧನೆ!


ವಿದ್ಯುನ್ಮಾನವು ಶಾಕ್ ಹೊಡೆದರೂ
ಮೆದುಳ ಬಲ್ಬು ಉರಿಯಲಿಲ್ಲ
ಇಂಗ್ಲೀಷು, ಕನ್ನಡ ತರಗತಿಯ ಕ್ಷಣಗಳೂ ಯುಗವಾದವು
ಅಂತೂ ಟೈಂ ಡೈಲೇಷನ್ ಅರ್ಥವಾಯಿತಲ್ಲ!


ಪ್ರಯೋಗಶಾಲೆಯಲ್ಲಿ ನಡೆಯದು ಪ್ರಯೋಗ
ತಲೆ ಜಜ್ಜಲೂ ಬರದು ಫಲಿತಾಂಶದ ಯೋಗ
ಆಕಳಿಸುವುದರಲ್ಲಿ ನೂರಕ್ಕೆ ನೂರು ಹೊಡೆದಿಹೆವು
ಎಂದೆಂದೂ ಮರೆಯಲಾಗದ ಬೀ.ಎಸ್ಸಿ ದಿನಗಳಿವು!!


ಪ್ರकवि(Prakavi)

©2009 Pradeep Features. All rights reserved.

ಮೋಹ ಮಾಯೆ

Posted by: prakavi on: July 15, 2009

ಮೋಹವೊಂದು ಮಾಯೆ
ದ್ರೋಹವದರ ಛಾಯೆ..
ಮಾಯೆ ಮೋಡಿ ಮಾಡಲು
ಛಾಯೆ ಎಂದೂ ಕಾಣದು..


ಕಣ್ಣಲೇ ಎದೆಯ ದೋಚುವ
ಮಾಯಾವಿಯೇ ಹೇಳು,
ದೋಚಿ ನನ್ನೆದೆಯ
ಪಡೆದೆಯೇನನು?


ದೋಚಿದ ಎದೆಯ ಆಡಿಸಿ
ಕಾಡಿಸಿ ಬಳಸಿ ನೋಯಿಸಿ
ಎಸೆವುದೇ ಮೋಜಿನ
ವಿಷಯವೇನು?


ಕನಸಿನ ತೋಟದ ಹೂಗಳನೆಲ್ಲ
ಕಿತ್ತು ಮುಳ್ಳನು ಬಿಟ್ಟು
ಹೋಗುವುದೇ ನಿನ್ನ
ಕಾಯಕವೇನು?


ಮಾಯೆ ಮುರಿದು, ಕಾರ್ಮೋಡ ಸರಿದು
ಬೆಳಕು ಹರಿಯಲು ಹರಡಿಹವು
ಒಡಲ ತುಂಬಾ ರಕ್ತಸಿಕ್ತ
ಎದೆಯ ಸಾವಿರ ಚೂರುಗಳು…


ಪ್ರकवि(Prakavi)

©2009 Pradeep Features. All rights reserved.

ಕಾಲದ ನದಿಯ ಹರಿವು

Posted by: prakavi on: June 29, 2009

ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..


ಮುಂದುವರೆದವರಿಲ್ಲ ಹರಿವ ವಿರುದ್ಧ ಹೋಗಿ
ಸಾಗಿದವರಿಲ್ಲ ಹರಿವ ಮೀರಿ ಈಜಿ
ಗೋಚರಿಸುವುದು ಹರಿವ ಜೊತೆ ಸಾಗಲು
ಕ್ಷಣ ಕ್ಷಣವೂ ಹೊಸತನದ ಹೂಬನ..


ಕೂರದಿರು ನದಿಯ ತೀರದಲಿ ಮುನಿದು
ಜಿಗಿದು ಹೊರಡಿಂದಿನ ನಾವೆ ಹಿಡಿದು
ಸಾಗು ಮುಗ್ಗರಿಸದೇ ಕಾಲದ ನದಿಯ ಹರಿವಿಗೆ
ಮುಂದೆ ಕಾದಿಹವು ವಿಸ್ಮಯಗಳು ಹಲವಾರು…


ಪ್ರकवि(Prakavi)

©2009 Pradeep Features. All rights reserved.

ಮುಂಜಾನೆ ನೋಟ…

Posted by: prakavi on: June 17, 2009

ಈ ಬ್ಲಾಗಿನಲ್ಲಿ ಪ್ರಕಾಷಿಸಿದ ಮೊದಲ ಕವನ ಮುಂಜಾನೆ ನೋಟ, ೨೦೦೮ರಲ್ಲಿ ಗೀಚಿದ್ದು, ಚೆನ್ನಾಗಿ ಮೂಡಿ ಬಂದಿಲ್ಲವೆಂದು ಕೇಳಿಬಂತು (ನನಗೂ ಹಾಗನಿಸಿತು!). ಅದನ್ನೇ ಚೂರು ಬೇರೆ ವಿಧದಲ್ಲಿ ಹೇಳುವ ಪ್ರಯತ್ನ ಕೆಳಗಿದೆ…

ಮೂಟೆಯಂತಹ ಚೀಲ
ಬಾಗಿದ ಬೆನ್ನ ಮೇಲೆ
ಹೊತ್ತು ಮೆಲ್ಲನೆ ಹೊರಟ
ಪುಟ್ಟ ಹೆಜ್ಜೆಗಳನಾಲಿಸಲು
ಇಣುಕಿರುವ ನೇಸರನ
ಎಳೆ ಕಿರಣಗಳಲಿ ಕಂಗೊಳಿಸುವ
ಚಿಲಿಪಿಲಿ ಹಕ್ಕಿಗಳ ಇಂಪು
ತುಂಬಿದ ಸುಂದರ ಮುಂಜಾನೆಯ
ಸೊಬಗ ಗಮನಿಸದೇ ಸಾಗಿವೆ
ಚಿಂತಾಭರಿತ ಪುಟ್ಟ ಕಣ್ಣುಗಳು..


ಪ್ರकवि(Prakavi)

©2009 Pradeep Features. All rights reserved.

ನಿನ್ನೊಲುಮೆಯ ತಂಗಾಳಿ…

Posted by: prakavi on: June 12, 2009

ನಿನ್ನೊಲುಮೆಯ ತಂಗಾಳಿ ಬೀಸಿದೆ
ಹಾಗೆ ಸುಮ್ಮನೆ ನಿನ್ನ ನೆನಪ ತಂದಿದೆ
ನೀನೆಲ್ಲಿರುವೆ, ಈಗ ಹೇಗಿರುವೆ..
ನೀ ನನ್ನ ಮರೆತರೂ
ಈ ಮನವು ಕೇಳಿದೆ..


ನೀನಿದ್ದ ವರುಷಗಳು
ಕ್ಷಣದಂತೆ ಜಾರಿದವು
ನೀನಿರದ ಕ್ಷಣಗಳು
ಯುಗದಂತೆ ಕಾಡುವವು


ಕಡಲಿನ ಅಲೆ ಅಲೆಯು
ಅರಸಿವೆ ನಿನ್ನ ನೋಟವ
ಬರುತಲೇ ತೀರಕೆ
ಬಯಸಿವೆ ನಿನ್ನ ಸ್ಪರ್ಷವ..


ನಿನ್ನೊಲುಮೆಯ ಅಲೆಯೊಂದು ಮೂಡಿದೆ
ನನ್ನೊಡಲಿನ ಕಡಲನ್ನು ಕೆದಕಿದೆ
ನೀನೆಲ್ಲಿರುವೆ, ಈಗ ಎಂತಿರುವೆ
ನೀ ದೂರವಾದೆಯೇಕೆ
ಕಾರಣ ತಿಳಿಸದೆ…


ಪ್ರकवि(Prakavi)

©2009 Pradeep Features. All rights reserved.

ಚಿನ್ನ ನಿನ್ನ ನೋಡಲು
ಕಂಗಳು ಬಾಯ್ದೆರೆದವು..
ಮನದಲೇ ನೀನುಳಿಯಲು
ಎದೆಯ ಬಡಿತವೇರಿತು..
ಎದೆಯಲೇ ನೀ ನೆಲೆಸಲು
ಪ್ರೀತಿಯು ಕಣ್ತೆರೆಯಿತು…


ನೋಟ.. ನಿನ್ನ ನೋಟ
ಮೈ, ಮನವ ಸೆಳೆವ ಚುಂಬಕ
ಮಾಟ.. ಮೈ ಮಾಟ
ಪ್ರೇಮ ಪಾಶವೆಸೆವ ಮಾಂತ್ರಿಕ


ಮಾತು.. ನಿನ್ನ ಮಾತು
ಕರ್ಣ ನಲಿಸುವಾ ವಾಣಿಯು
ಮೌನ.. ನಿನ್ನ ಮೌನ
ಚಿತ್ತ ಚುಚ್ಚುವ ಸೂಜಿಯು


ಮಾತು ನಿನ್ನ ಕೇಳಲು
ಕಿವಿಗಳು ಕುಣಿದು ನಲಿದವು..
ಮೌನಿಯಾಗಿ ನೀನಿರಲು
ಮನಕೆ ಕಾರ್ಮೋಡ ಕವಿದವು..
ಮೌನವ ನೀ ಮುರಿಯಲು
ಪ್ರೀತಿಯು ಮತ್ತೆ ಅರಳಿತು…


ಪ್ರकवि(Prakavi)

©2009 Pradeep Features. All rights reserved.

 

November 2009
M T W T F S S
« Oct    
 1
2345678
9101112131415
16171819202122
23242526272829
30  

Blog Stats

  • 9,244 visited...

Copyright©Pradeep Features